ರೇಣುಕಾ ಕೋಡಗುಂಟಿಯವರು ಸಂಪಾದಿಸಿರುವ ’ಕರ್ನಾಟಕದಲ್ಲಿ ಶವಸಂಸ್ಕಾರ’ ಎಂಬ ಗ್ರಂಥವು ವಿವಿಧ ವಿಷಯಗಳ ತಜ್ಞರು ಬರೆದ ೨೧ ಉತ್ತಮ ಮಟ್ಟದ ಲೇಖನಗಳನ್ನು ಒಳಗೊಂಡಿದೆ. ಇದು ಸಂಶೋಧನಾ ಕ್ಷೇತ್ರಕ್ಕೆ ಕನ್ನಡ ಭಾಷೆಯಲ್ಲಿ ಬರೆದ ಒಂದು ಉತ್ತಮ ಕೊಡುಗೆಯಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಶೈಕ್ಷಣಿಕ ವಲಯದಲ್ಲಿ ಅಂತರ್ ಶಿಸ್ತೀಯ (Interdisciplinary) ಮತ್ತು ಬಹುಶಿಸ್ತೀಯ (Multidisciplinary) ಸಂಶೋಧನೆಗಳಿಗೆ ಬಹಳ ಮಹತ್ವವನ್ನು ಕೊಡಲಾಗಿದೆ. ಒಂದು ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ತಜ್ಞರಿಂದ ಸಂಶೋಧನಾತ್ಮಕ ಲೇಖನಗಳನ್ನು ಬರೆಸುವುದು ಈ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಒಂದು ಮಹತ್ತರವಾದ ಹೆಜ್ಜೆಯಾಗಿದೆ. ಈ ಗ್ರಂಥದ ಸಂಪಾದಕರು ಇಂತಹ ಒಂದು ಮಹತ್ಕಾರ್ಯವನ್ನು ಮಾಡಿ ಕರ್ನಾಟಕದ ಶೈಕ್ಷಣಿಕ ಸಮುದಾಯದ ಕೃಪೆಗೆ ಪಾತ್ರರಾಗಿದ್ದಾರೆಂದು ನಾನು ಭಾವಿಸುತ್ತೇನೆ. ಕರ್ನಾಟಕದ ಅನೇಕ ಹೆಸರಾಂತ ಮತ್ತು ಪ್ರತಿಭಾವಂತ ಹಿರಿಯ ಮತ್ತು ಕಿರಿಯ ಸಂಶೋಧಕರಿಂದ ಸಂಗ್ರಹಿಸಿದ ಲೇಖನಗಳು ಈ ಗ್ರಂಥದಲ್ಲಿವೆ.